ಶುಕ್ರವಾರ, ನವೆಂಬರ್ 28, 2008

೨. ಒಂದು ಹೂವಿನ ಕಥೆ

ಒಂದಾನೊಂದು ಕಾಲದಲ್ಲಿ ಕೆಂಪು ಮಣ್ಣಿನ ಮೇಲೆ
ನನ್ನಜ್ಜಿ ಸಾಕಿದ ಮಗಳು ಒಂದು ಮೊಗ್ಗ ಹಡೆದಿದ್ದಳು

ಮೊಗ್ಗನ್ನು ಮದುಮಗಳಾಗಿ ಮಾಡಿದ ಸೂರ್ಯ
ರಂಗುರಂಗಿನ ಸೀರೆಯನ್ನುಟ್ಟು ನಾಚಿ ನಿಂತಳು ಚೆಲುವೆ

ಸೀಮೆಯ ಸುಂದರಿಯರು ಅವಳ ರೂಪ ಲಾವಣ್ಯವ ಕಂಡು ಅಸೂಯೆ ಪಟ್ಟರು
ಅವಳ ಆಕರ್ಷಣೆಗೆ ಒಳಗಾದ ಬಣ್ಣ ಬಣ್ಣದ ಚಿಟ್ಟೆಗಳು ಮುತ್ತಿಡಲು ಬಂದಾಗ

ಯಾರಿಗು ಒಲಿಯದೆ ಸೊಕ್ಕಿನಲಿ ನಲಿದಳು
ಮುಗ್ದ ಮನಸ್ಸಿನಲ್ಲಿ ನೂರೆಂಟು ಆಸೆಗಳು ಅರಳಿ

ಹೃದಯದಲ್ಲಿ ಆಸೆ ಚಿಗುರೊಡೆದಾಗ
ಬೀಸುವ ಗಾಳಿಯ ಜೊತೆ ಹಾರಿತು ಮನಸ್ಸು

ಹರೆಯದ ಪ್ರಾಯದಲಿ ಪ್ರೀತಿ ಪ್ರೇಮದ ಭಾವನೆಗಳು ಬೆಳೆದು ಹೆಮ್ಮರವಾಯಿತು
ಪ್ರಣಯದ ಮಾತನಾಡಲು ಬೀದಿಯಲ್ಲಿ ಹೋಗುತ್ತಿದ್ದ ಅವನ ಕೈ ಬೀಸಿ ಕರೆದಳು

ರಸಿಕತೆಯ ಗಂಧವಿಲ್ಲದೆ ಒಮ್ಮೆಯೆ ಮೇಲೆರಗಿ
ಜೇನ ಹೀರಿ
ಹಾರಿಹೋದ......ರಾಕ್ಷಸ..

ಮೋಸಗೊಂಡು ಆಘಾತಕ್ಕೊಳಗಾದ ತ್ರಿಲೋಕ ಸುಂದರಿ
ಅವನದೇ ನೆನಪಲ್ಲಿ ಕೊರಗಿ

ಕೆಂಪು ಮಣ್ಣಿನಲಿ
ಕರಗಿ ಹೋದಳು
................
................

ಕತ್ತಲು ಕಳೆದು ಬೆಳಕು ಮೂಡಿತು..
ಚಿಗುರೊಡೆಯಿತು ಶಿಶುವಿನ ಕನಸು

ಮುಂಜಾನೆಯ ಮಂಪರಿನಲ್ಲಿ ಕಣ್ಣುಜ್ಜುತ್ತಾ ಬಂದ ನನ್ನಜ್ಜಿ
ಮೊಮ್ಮಗಳು ಹುಟ್ಟಿದುದ ಕಂಡು ಸಂತೋಷದಿಂದ ಕುಣಿಯುತ್ತಿದ್ದಾಳೆ.......

-ರಾಜೇಶ್

೩. ಸ್ಥಿತಿ

ಯಾರು ಇರಲಿಲ್ಲ
ನಾನು ನೀನು ಇಬ್ಬರು ಮಾತ್ರ ಅಲ್ಲಿ
ನಾಲ್ಕು ಕಣ್ಣುಗಳ ಒಪ್ಪಿಗೆ ಮಾತ್ರ ಅಲ್ಲಿ
ಕನಸುಗಳಿಲ್ಲ, ಆಸೆಗಳಿಲ್ಲ
ಭಾವನೆಗಳು ಗೊತ್ತೇ ಇಲ್ಲ
ನಾಯಿಯ ಬುದ್ಧಿಯ ಜೊತೆ
ಪಂಚೇಂದ್ರಿಯಗಳ ಪತನ
ಹೃದಯದ ಬಡಿತ, ಬೆವರಿದ ಮೈ
ಸಕಲ ಜೀವರಾಶಿಗಳು ಮಾಯವಾಗಿ
ಕಲ್ಲು ಕರಗುವ ಸಮಯದಲ್ಲಿ...ಧ್ಯಾನ
ತಂಪಾದ ಸೂರ್ಯೋದಯ
-ರಾಜೇಶ್


ಗುರುವಾರ, ನವೆಂಬರ್ 13, 2008

೧. ತಂಗಿಯ ಕತೆ

ನನ್ನವ್ವ ತಂಗಿಯ ಹೆತ್ತಾಗ
ಮುತ್ತಿಕ್ಕಿ.. ಮುತ್ತಿಕ್ಕಿ.. ಮುದ್ದಾಡಿದರು

ನಡೆದಾಗ,
ಬಣ್ಣದ ಬಟ್ಟೆಯ ತೊಡಿಸಿ, ದೃಷ್ಠಿ ಬೊಟ್ಟನಿಟ್ಟವರು

ಬುಜದೆತ್ತರಕೆ ಬೆಳೆದಾಗ
ಲಂಗದವಣಿಯ ತೊಡಿಸಿ ಚಿನ್ನ ಬಣ್ಣವನಿಕ್ಕಿದರು

ಮದುವಣಗಿತ್ತಿಯ ಶೃಂಗಾರ ಮಾಡಿ
ಕನಸ ಕಂಡವರು

ಅತ್ತಾಗ
ತಬ್ಬಿಕೊಂಡು ಅತ್ತರು

ನಕ್ಕಾಗ
ಕಷ್ಟ ನಷ್ಟಗಳ ಮರೆತವರು

ಒಮ್ಮೆ ಅವಳು
ಪಕ್ಕದೂರಿನ ಕಪ್ಪು ಗುಲಾಬಿಯ
ಮೆಚ್ಚಿ ಮುಡಿದುದ ಕಂಡು ಕರುಬಿದರು

ಬೀದಿಯ ಬಾಯಿಗೆ ಅಂಜಿದವರು

ಅವಮಾನದ ಮಬ್ಬಿಗೆ ಸಿಲುಕಿದರು..
.............................

ಅವಳ
ಬೆಂಕಿಗೆ ಬಲಿಯ ನೀಡಿದರು
..............................

ನನ್ನ ಜನ

-ರಾಜೇಶ್