ಭಾನುವಾರ, ನವೆಂಬರ್ 29, 2009


ಬಯಲು ಸೀಮೆಯವನಾದ ನನಗೆ
ಗಣೇಶನನ್ನು ಕೆರೆಯಲ್ಲಿ ಬಿಡಲು ಹೋಗಿ
ಗೆಳೆಯನನ್ನು ಕಳೆದುಕೊಂಡದ್ದು ಮಾತ್ರ ನೆನಪು.


ನೆರೆ ಬಂದು ನನ್ನ ಕುಟುಂಬ
ಕೊಚ್ಚಿ ಹೋದದ್ದು ನನ್ನ ಕಣ್ಣಿಂದ
ಇನ್ನೂ ಮಾಸಿರಲಿಲ್ಲ....ಅಷ್ಟರಲ್ಲೆ,

ಅಂದು ಟೀವಿಯಲ್ಲಿ
ಸುನಾಮಿಯ ಕಡಲಾಟ

ನಿನಗೆ ಮೂಗುದಾರ ಹಾಕಿದವರು, ಕೈಮುಗಿದವರು
ಎಂದೂ ಬಗೆಯದೆ, ಎಲ್ಲವನ್ನು ಎಲ್ಲರನ್ನು ಕಡೆದು
ಒಮ್ಮೆಯೇ ಆವರಿಸಿ
ನಮ್ಮ ಧರ್ಮ ಧಿಗ್ಭಾಲಕರನ್ನು ಬಿಡದೆ
ನುಂಗಿಕೊಂಡ ನೀನು ನರಭಕ್ಷಕಿ.!

ನಾನು ಮನುಜ ಪಕ್ಷಪಾತಿ.

A young boy mourns the loss of his mother

ಬುಧವಾರ, ನವೆಂಬರ್ 25, 2009

ನನ್ನ ಹಳೆಯ ಕೆಲವು ಪದ್ಯಗಳು


ಅರಿವಿಗಾಗಿ ಗುರುವಿನೆಡೆಗೆ

ತಪಸ್ಸಿಗೆಂದು ಬೋಧಿ ವೃಕ್ಷದ ಕೆಳಗೆ ಕುಳಿತಾಯ್ತು

ಈ ಸಂತೆಯಿಂದ ದೂರ ಸರಿದು ಕಾಡು ಸೇರಾಯ್ತು

ಜಪ ತಪವೆಂದೆಲ್ಲ ಸಮಯ ಕಳೆದಾಯ್ತು ವಿಜ್ಞಾನವ ತಿಳಿದಾಯ್ತು

ತಂತ್ರ ಮಂತ್ರವ ಅಳೆದಾಯ್ತು

ಪಂಚ ಭೂತಗಳೊಂದಿಗೆ ಸಂಘರ್ಷ ಮಾಡಿದರೂ ಕಾಣಲಿಲ್ಲ ಬೆಳಕು?

ಸೋತು ಅಲೆಮಾರಿಯಾಗಿ ಅಲೆಯುತ್ತಿದ್ದೆ

ಗೊಂದಲದ ಗೂಡಿನಲ್ಲಿ ಬಂದಿಯಾಗಿದ್ದೆ

ತಿರಸ್ಕಾರದ ಮನಸ್ಸು ಬುದ್ದಿಯ ಕಟುಕಿತ್ತು

ಅಂದು.! ಮುಸ್ಸಂಜೆಯ ಮಳೆಯಲ್ಲಿ ನಿನ್ನ ಕಂಡ ನಾನು

ಒಲವಿನ ಬಲೆಯಲ್ಲಿ ಸಿಲುಕಿ ನಿನಗಾಗಿ ಹಂಬಲಿಸಿದಾಗ

ನೀ ಬಂದು ನನ್ನ ಬಿಗಿದಪ್ಪಿ ಕಾದ ತುಟಿಗಳಿಂದ ಚುಂಬಿಸಿದಾಗ

ಪಂಚೇಂದ್ರಿಯಗಳು ಹತ್ತಿ ಉರಿದಿತ್ತು

ಆ ಕ್ಷಣ ನಾನು ನಾನಲ್ಲ ನೀನು ನೀನಲ್ಲ

ಭೂತ ಮಾಯವಾಗಿ, ಭವಿಷ್ಯ ಕುರುಡಾಗಿ, ಕಾಲ ಕರಗುತಿತ್ತು...

ನೀ ನನ್ನ ಗುರುವಾಗಿದ್ದೆ. ನಾ ನಿನ್ನ ಮಗನಾಗಿದ್ದೆ

ರಾಜಿ. 4-10-2003

ಕಬ್ಬಿಣದ ಸರಳುಗಳ ಹಿಂದೆ

ಕನಸುಗಳ ಬಂಧನದಲ್ಲಿರುವ

ಆ ಎರಡು ಬೆಳಕಿನ ಕಿಟಕಿಯಲ್ಲಿ

ಕಂಡ ಜಗತ್ತುಗಳೆಷ್ಟೊ?

ಕಾಣದ ಲೋಕಗಳೆಷ್ಟೊ

ರಾಜಿ.


ಮರಳುಗಾಡಿನಲ್ಲಿ ಮೋಡಗಳು ಚದುರಿ

ನೆಲವು ಇಬ್ಬನಿಯ ಹೀರಿದಾಗ

ಒಣಗಿದ್ದ ಬೀಜ ಮೊಳೆತಿತ್ತು
ರಾಜಿ.

ಶನಿವಾರ, ನವೆಂಬರ್ 21, 2009

ಉರುಳು

ನಾನು ಹುಟ್ಟಿದ್ದೆ ಅಭಿನಯಿಸಲೆಂಬ ಅಹಂಕಾರ, ನಟನೆ ನನ್ನ ರಕ್ತದಲ್ಲೇ ಇದೆ, ನಾನೊಬ್ಬ ಅದ್ಬುತ ಡಾನ್ಸರ್, ಹೀಗೆಲ್ಲ ತಲೆಯಲ್ಲಿ ಅಹಂಕಾರದ ಮದ. ನೋಡಿದ ನಾಟಕ, ಸಿನೆಮಾದ ನಟರ ಬಗ್ಗೆ ಇಲ್ಲ ಸಲ್ಲದ ಮಾತಾಡುತ್ತಿದ್ದ ನನಗೆ ಅಂದು ಸ್ಟೇಜಿನ ಮೇಲೆ ಮಾತುಹೊರಡದಾಗಿತ್ತು, ನನ್ನ ಕಣ್ಣ ಮುಂದೆ ಕತ್ತಲೆ, ಕತ್ತಲೆಯ ಮಧ್ಯ ಕಾಣುತ್ತಿದ್ದ ನೋಡುಗರ ಕಣ್ಣುಗಳಿಗೆ ನನ್ನ ಮೇಲೆ ಅನುಕಂಪದ ಭಾವನೆ. ನನ್ನೆದುರಿಗಿದ್ದ ನನ್ನ ಗೆಳೆಯನ ಅಸಹಾಯಕ ನೋಟ, ಆತ "ರಾಜೇಶ್ ಯಾಕೆ ಹೀಗೆ ಮಾಡ್ತಿದೀರ? ನಾನು ಹೇಳ್ದೆ individual ಆಗಿ ಪ್ರಾಕ್ಟೀಸ್ ಮಾಡ್ಕೊಳಿ" ಅಂತ ಹೇಳಿದ್ದು ನೆನಪಾಗಿತ್ತು. ಯಾಕೆಂದರೆ ಆತ ನನ್ನ ಮುಂದಿನ ಸಂಭಾಷಣೆಗಾಗಿ ಕಾಯುತ್ತಿದ್ದ, ನಾನು ಅಸಹಾಯಕನಾಗಿ ಧಿಘ್ಬ್ರಾಂತನಾಗಿ ಅವನನ್ನೇ ನೋಡುತ್ತಿದ್ದೆ, ನನ್ನ ಹೃದಯದ ಬಡಿತ ಏರುತ್ತಿತ್ತು, ಮೈ ಬೆವರಲು ಶುರುವಾಯಿತು, ಎಲ್ಲೆಲ್ಲು ಕತ್ತಲು, ಒಂದು ಕ್ಷಣ ನಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂದು ತಿಳಿಯದಾಗಿತ್ತು. ಆ ದಿನದ ಹಿಂದಿನ ದಿನ, ನನ್ನ ಗೆಳೆಯ 'ಬಾಡಿಗೆ ಮನೆ' ನಾಟಕದಲ್ಲಿ ಡೈಲಾಗ್ ಹೇಳಲು ತೊದಲಿ ಸಭಿಕರಿಗೆ 'sorry' ಅಂದದ್ದನ್ನು ಕಂಡು ಆಡಿಕೊಂಡಿದ್ದು ನೆನಪಿಗೆ ಬಂತು. ಮಾತೆತ್ತಿದರೆ Theaterna Ideology & commitmentu ಅಂತೆಲ್ಲ ಕೊಚ್ಚಿಕೊಂಡು ಮಾತಾಡುತ್ತಿದ್ದದು ನೆನಪಿಗೆ ಬರುತಿತ್ತು. ದಗುಡ ಹೆಚ್ಚಾಗುತ್ತಿತ್ತು. ಮುಂದಿನ ಡೈಲಾಗ್ ನೆನಪಿಗೆ ಬರುತ್ತಿರಲಿಲ್ಲ. ನಾಟಕಕ್ಕೆ ಬೆಳಕು ನೀಡುತಿದ್ದ ನನ್ನ ಗೆಳೆಯ ಬಹುಶಹ ನನ್ನ ಬೈದುಕೊಳ್ಳುತ್ತಿದ್ದ ಅನ್ನಿಸುತ್ತೆ, ಸಂಗೀತ ನೀಡುತಿದ್ದ ನನ್ನ ಇನ್ನೊಬ್ಬ ಗೆಳೆಯನಿಗೆ 'ರಾಜೇಶ್ ಯಾಕ್ ಹೀಗಾಗ್ತಿದೆ' ಅಂದುಕೊಂಡನೇನೊ!. ಯಾಕೆಂದರೆ ಸಂಗೀತ, ಬೆಳಕು ಇವ್ಯಾವುದರ ಗಮನವು ಎಲ್ಲದೆ ಘರ ಬಡಿದಂತೆ ನಾನು ರಂಗ ಮಂಚದಲ್ಲಿ ನಿಂತುಬಿಟ್ಟಿದ್ದೆ. ಬೆಳಕು ನನ್ನ ಕಣ್ಣಿಗೆ ರಾಚುತ್ತಿತ್ತು. ಕಿವಿ ಕಿವುಡಾಗಿ ಮಾತು ಹೊರಡದ ಸ್ಥಿತಿಯಲ್ಲಿದ್ದೆ. ತಕ್ಷಣ ನನ್ನ ಸಹನಟನಾದ ಗೆಳೆಯ ನನ್ನ ಸ್ಥಿತಿ ಕಂಡು, ನನ್ನ ಡೈಲಾಗ್ ಎಗರಿಸಿ ಮುಂದಿನ ಡೈಲಾಗ್ ತೆಗೆದುಕೊಂಡ. ನಂತರ ಹೇಗೊ ಮರೆತ ಡೈಲಾಗ್ ನೆನಪಿಗೆ ಬಂದು ನಾಟಕ ಮುಗಿಸಿದೆ.

ನನ್ನಿಂದ ನನ್ನ ಗೆಳೆಯನಿಗೆ ಹಿಂಸೆಯಾಗುತ್ತಿತ್ತು. ಅಂದು ನಾನು ಅವನನ್ನು ರಂಗಮಂಚದಲ್ಲಿ ಕೊಂದಿದ್ದೆ. ಅತಿಯಾದ ಆತ್ಮವಿಶ್ವಾಸ ಮತ್ತು ಸಿದ್ದತೆ ಇಲ್ಲದೆ ರಂಗಮಂಚವನ್ನು ಏರಿದ್ದು ನನ್ನ ಈ ಸ್ಥಿತಿಗೆ ಕಾರಣವಾಗಿತ್ತು. ಅಂದು ನನ್ನ ಪಾತ್ರಕ್ಕೆ ಜೀವ ತುಂಬುವಲ್ಲಿ ಸೋತ ಕ್ಷಣ. ಮೊದಲಬಾರಿ ನಾನು ರಂಗಮಂಚದಲ್ಲಿ ನಾನು ನನ್ನ ಸೋಲನ್ನು ಒಪ್ಪಿಕೊಂಡಿದ್ದೆ. ಆದರೆ ಕೃತಿಗೆ ಅನ್ಯಾಯ ಎಸಗಿದ್ದೆ. ಸಭಿಕರು ನೀಡಿದ ದುಡ್ಡಿಗೆ ಬೆಲೆ ಸಿಗಲಿಲ್ಲ. ನಾಟಕದ ಅರ್ಥವೇ ಬದಲಾಗಿತ್ತು. ನಿರ್ದೇಶಕರಿಗೆ ಅನ್ಯಾಯ ಮಾಡಿದ್ದೆ. ಆದರು ಅವರು ನನ್ನನ್ನು ಕ್ಷಮಿಸಿದರು. ನಾಟಕ ಸೋತಿತ್ತು. 'ಸೊತಿದ್ದು ನನ್ನಿಂದ' ನಾಟಕ ಸೋಲಿಗೆ ನಟನೇ ಕಾರಣ. ಏಕೆಂದರೆ ನಾಟಕ ನಟನ ಮಾದ್ಯಮ.

ನಾಟಕದ ಮುಖ್ಯ ತಿರುಳು 'ದಯಾ ಮರಣದ ಕುರಿತು" ಹಿಂದಿಯಲ್ಲಿ ಡಾ.ಶಂಕರ್ ಶೇಶ್ ಬರೆದ ನಾಟಕವನ್ನು ಸದಾನಂದ ಸುವರ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಉರುಳು' ಎಂದು ನಾಟಕದ ಹೆಸರು. ಇದು ನಿಸ್ಸಂಶಯವಾಗಿ ನಟನ ಸಾಮರ್ಥ್ಯಕ್ಕೆ ಸವಾಲು ಹಾಕುವ ಕೃತಿ. ಕೇವಲ ಇಬ್ಬರು ಪಾತ್ರಧಾರಿಗಳಿರುವ ಈ ನಾಟಕದ ಸಂಭಾಷಣೆಗಳು ತುಂಬಾ ಅರ್ಥಗಭಿತವಾಗಿವೆ. ಕ್ಯಾನ್ಸರ್ ರೋಗದ ಹಾಗು ಅದರಿಂದ ರೋಗಿಯು ಪಡುವ ಹಿಂಸೆಯನ್ನು ನೋಡಲಾರದೆ ಮಗನೇ ತಂದೆಯನ್ನು ಕೊಂದು ನಂತರ ನ್ಯಾಯಾಲಯದಲ್ಲಿ ನಡೆಯುವ ವಾಗ್ವಾದಗಳೇ ನಾಟಕದ ಮುಖ್ಯ ಭಾಗ.

ಹೀಗೆ ಆದದ್ದು ನನ್ನ ಜೀವನದಲ್ಲಿ ಮೊದಲಬಾರಿ. ಅಂದು ನಾನು ಸೋತಿದ್ದೆ, ಮಾನಸಿಕವಾಗಿ ಜರ್ಜರಿತವಾಗಿದ್ದೆ. ಈ ಅನುಭವ ನನ್ನಲ್ಲಿ ತೀರ್ವತರವಾದ ನೋವು ತಂದಿತ್ತು. ನನ್ನ ಗೆಳೆಯರು ನನ್ನ ಸಹಾಯಕ್ಕೆ ಬಂದಿದ್ದರು. 'It happens man forget it' ಅಂತ ಸಮಾಧಾನ ಹೇಳಿದ್ದರು. ನಿರಂತರ ಶ್ರಮದಿಂದ ಮತ್ತೆ ಪ್ರಯತ್ನಿಸು ಎಂದು ಸಲಹೆ ನೀಡಿದರು. ಆದರೆ ನಾನು ಘಾಸಿಗೊಂಡಿದ್ದೆ. ನನಗೆ ಈ ಶಾಕ್ ನಿಂದ ಹೊರಬರಲು ಸಮಯ ಬೇಕು ಎಂದು ನನ್ನ ಮನಸ್ಸು ಹೇಳುತ್ತಿತ್ತು. ನಾನು ನನ್ನ ಮನಸ್ಸಿನ ಮಾತು ಕೇಳಿದೆ. ನಟನೆಯಿಂದ ಕನಿಷ್ಠ ಎರೆಡು ವರ್ಷ ದೂರವಿರಲು ನಿರ್ಧರಿಸಿದೆ. ಈಗ ವೃತ್ತಿಯ ಕಡೆ ಗಮನ ಹರಿಸಿದ್ದೇನೆ ಹಾಗೆ ಸಿನೆಮ, ನಾಟಕದ ಬಗ್ಗೆ ಅದ್ಯಯನ ಮುಂದುವರೆಯುತ್ತಿದೆ.